ಜಮ್ಷೆಡ್‍ಪುರ -
ಬಿಹಾರ ರಾಜ್ಯದ ಸಿಂಘ್‍ಭೂಮ್ ಜಿಲ್ಲೆಯಲ್ಲಿರುವ ಉಕ್ಕು ತಯಾರಿಕೆ ನಗರ. ಮುಂಬಯಿ-ನಾಗಪುರ-ಕಲ್ಕತ್ತ ರೈಲು ಮಾರ್ಗದಲ್ಲಿ, ಕಲ್ಕತ್ತದಿಂದ ಪಶ್ಚಿಮ-ವಾಯುವ್ಯಕ್ಕೆ 156 ಮೈ.ದೂರದಲ್ಲಿ ಖನಿಜ ನಿಕ್ಷೇಪಯುಕ್ತವಾದ ಛೋಟಾ ನಾಗಪುರ ಪ್ರಸ್ಥಭೂಮಿಯ ಆಗ್ನೇಯ ಅಂಚಿನ ಬಳಿ, ಉ.ಅ.22( 44' ಮತ್ತು ಪೂ.ರೇ. 86( 20' ಮೇಲೆ ಇದೆ, ಜನಸಂಖ್ಯೆ 3,56,783 (1971). ಇದೊಂದು ಆಧುನಿಕ ಸುಯೋಜಿತ ನಗರ. ಸುವರ್ಣರೇಖಾ, ಖಾರ್‍ಖಾಯಿ ಹಾಗೂ ಸಂಜಯ್ ನದಿಗಳ ಸಂಗಮದ ಬಳಿ 29 ಚ.ಮೈ.ಪ್ರದೇಶದಲ್ಲಿ ನಿರ್ಮಿತವಾಗಿದೆ. ಸಾಕ್ಚಿ ಎಂಬ ಸಣ್ಣ ಹಳ್ಳಿ ಇದ್ದ ಸ್ಥಳದಲ್ಲಿ ಈ ನಗರ ಬೆಳೆದಿದೆ. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಾಗಿ ಸ್ಥಳವನ್ನು ಆರಿಸುವುಕ್ಕೆ ಚಂದಾ ಜಿಲ್ಲೆಯ ಮತ್ತು ಮಧ್ಯ ಪ್ರದೇಶದ ದುರ್ಗ್ ಜಿಲ್ಲೆಯ ಕಬ್ಬಿಣ ಅದುರಿನ ನಿಕ್ಷೇಪಗಳ ಪ್ರದೇಶಗಳನ್ನು ಪರಿಶೋಧಿಸಲಾಯಿತು. ಆದರೆ ಅವಕ್ಕಿಂತ ಜಮ್‍ಷೆಡ್ ಪುರದ ನಿವೇಶನ ಎಲ್ಲ ರೀತಿಗಳಲ್ಲೂ ಅನುಕೂಲಕರವೆಂದು ವೇದ್ಯವಾಯಿತು. ಕಿಟ್ಟದ ಕಲ್ಲಿದ್ದಲೇ ಮುಂತಾದವನ್ನು ಕೈಗಾರಿಕಾ ನಿವೇಶನಕ್ಕೆ ಸಾಗಿಸುವುದರ ತೊಂದರೆಯ ದೃಷ್ಟಿಯಿಂದ ಆ ನಿವೇಶನಗಳನ್ನು ಕೈಬಿಡಲಾಯಿತು. 1907ರಲ್ಲಿ ಇಲ್ಲಿ ತಾತಾ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪಿತವಾಯಿತು. ಶೀಘ್ರವಾಗಿ ಈ ಕೈಗಾರಿಕೆಯೂ ಇತರ ಸಂಬಂಧಿತ ಕೈಗಾರಿಕೆಗಳೂ ಇಲ್ಲಿ ಬೆಳೆದುವು. ಕಬ್ಬಿಣ-ಉಕ್ಕಿನ ಕಾರ್ಖಾನೆಯ ಸ್ಥಾಪಕರಾದ, ಭಾರತದ ಆದ್ಯಪ್ರವರ್ತಕ ಉದ್ಯಮಪತಿಗಳಾದ ಜಮ್ಷೆಡ್‍ಜಿ ನಸರ್ ವಾಂಜಿ ತಾತಾ ಅವರ ಹೆಸರಿನಲ್ಲಿ ಇದಕ್ಕೆ ಜಮ್ಷೆಡ್‍ಪುರ ಎಂಬ ಹೆಸರು ಬಂದಿದೆ. ಅರಣ್ಯಾವೃತ ಹಾಗೂ ವ್ಯವಸಾಯ ಪ್ರದೇಶದ ನಡುವೆ ಜಮ್ಷೆಡ್ ಪುರ ನಗರ ಒಂದು ಭಾರಿ ಕೈಗಾರಿಕಾ ದ್ವೀಪದಂತಿದೆ. ಬಹುತೇಕ ಆದಿವಾಸಿ ಜನರಿರುವ ಈ ಪ್ರದೇಶ ಬಂಡವಾಳದ ಉದ್ಯಾನದಂತಿದೆ. 

	ಸನ್ನಿವೇಶದ ದೃಷ್ಟಿಯಿಂದ ಜಮ್ಷೆಡ್‍ಪುರಕ್ಕೆ ಅನೇಕ ಅನುಕೂಲತೆಗಳುಂಟು. ಇಲ್ಲಿಂದ 245 ಕಿಮೀ. ದೂರದಲ್ಲಿರುವ ಕಲ್ಕತ್ತ ಇದರ ಪ್ರಧಾನ ಬಂದರು. ಇದು ಪೂರ್ವತೀರಕ್ಕೆ ಬಹಳ ಹತ್ತಿರದಲ್ಲಿದೆ. ಕಬ್ಬಿಣ ಮತ್ತು ಉಕ್ಕಿನ ವಸ್ತುಗಳಿಗಾಗಿ ವಿಶಾಲ ಹಾಗೂ ಸಿದ್ಧಮಾರುಕಟ್ಟೆಯುಂಟು. ಹೊಸ ಕಾರ್ಖಾನೆಗಳ ಸ್ಥಾಪನೆಗೆ ಅನುಕೂಲವಾದ ಸೂಕ್ತವಾದ ಭೂಮಿ ಬೇಕಾದಷ್ಟು ಇಲ್ಲಿ ದೊರೆಯುತ್ತದೆ. ಕಬ್ಬಿಣ ಅದುರಿನ ಗಣಿಗಳುಂಟು.

	ಕಚ್ಚಾಸಾಮಗ್ರಿಗಳ ದೃಷ್ಟಿಯಿಂದಲೂ ಇದರ ಪ್ರಾಮುಖ್ಯ ಹೆಚ್ಚಿನದು. ಎಪ್ಪತ್ತು ಮೈಲಿಗಳ ಅಂತರದಲ್ಲೇ ಅವು ಬಹುತೇಕ ಲಭ್ಯವಿವೆ. ಸಿಂಘ್‍ಭೂಮ್‍ನ ಕಬ್ಬಿಣ ಅದುರಿನ ನಿಕ್ಷೇಪಗಳು ಅಗಾಧ. ಸುಮಾರು 270ಕೋಟಿ ಟನ್‍ಗಳಷ್ಟು ಹೆಮಟೈಟ್ ಇದೆಯೆಂಬುದು ಅಂದಾಜು. ಮಿಶ್ರಣ ಲೋಹಗಳ ಪೈಕಿ ಸ್ಥಳೀಯ ಮ್ಯಾಂಗನೀಸ್ ಹೆಚ್ಚು ವೆಚ್ಚದಾಯಕ. ಇದನ್ನು ಮಧ್ಯ ಪ್ರದೇಶದಿಂದ ತರಿಸಿಕೊಳ್ಳಬೇಕು. ಒರಿಸ್ಸದ ಕ್ರೋಮೈಟ್ ಹೆಚ್ಚು ಅಗ್ಗವಾಗಿ ದೊರಕುತ್ತದೆ. ತಾಪಧಾರಕವಾಗಿ (ರಿಫ್ರಾಕ್ಟರಿ) ಉಪಯುಕ್ತವಾದ ಕೈಯನೈಟ್ ಸ್ಥಳೀಯವಾಗಿ ಲಭ್ಯವಿದೆ. ಅಪಟೈಟೂ ದೊರಕುತ್ತದೆ. ಝೂರಿಯಾದಲ್ಲಿ ಕಾವು ಝೇಡು, ಮನ್‍ಭೂಮ್‍ನಲ್ಲಿ ಸಿಲಿಕ ದೊರಕುತ್ತವೆ. ತಾಮ್ರ ಭಾರತದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುವುದಿಲ್ಲ. ಅದೊಂದು ಕೊರತೆಯ ಲೋಹ, ಜಮ್ಷೆಡ್‍ಪುರಕ್ಕೆ 35 ಮೈ. ದೂರದಲ್ಲಿ ಘಟ್ಸಿಲಾದಲ್ಲಿ ಕರಗಿಸಿ ಮನಭಂದರ್‍ದಲ್ಲಿ ಉರುಳೆಗಳನ್ನಾಗಿ ಮಾಡಲಾಗುತ್ತದೆ. ಉತ್ತರಕ್ಕೆ ಮುರಿಯಲ್ಲಿ ಅಲ್ಯೂಮಿನಿಯಂ ಸ್ಥಾವರ (ಪ್ಲಾಂಟ್) ಇದೆ. ಪುರುಲಿಯದಲ್ಲಿ ಪರಿಷ್ಕರಣ ಕೇಂದ್ರವುಂಟು. ದಕ್ಷಿಣಕ್ಕೆ ಒರಿಸ್ಸದ ಬಾಕ್ಸೈಟ್ ನಿಕ್ಷೇಪಗಳಿವೆ. ಬಾಕ್ಸೈಟನ್ನು ಹಿರಾಕುಟ್ ಜಲವಿದ್ಯುತ್ ಕೇಂದ್ರದಲ್ಲಿ ಕರಗಿಸಲಾಗುತ್ತದೆ. ಕಿಟ್ಟಕಲ್ಲಿದ್ದಲು ಮುಖ್ಯವಾಗಿ ಬರುವುದು ದಾಮೋದರ್ ಕಣಿವೆ ಪ್ರದೇಶದಿಂದ ಸಾಮಗ್ರಿಗಳ ಲಭ್ಯತೆಯ ದೃಷ್ಟಿಯಿಂದ ಜಮ್ಷೆಡ್‍ಪುರಕ್ಕಿಂತ ಒಳ್ಳೆಯ ಸನ್ನಿವೇಶ ಪಡೆದಂಥ ಸ್ಥಳಗಳೂ ಹೆಚ್ಚಿಲ್ಲ.

	ಕೈಗಾರಿಕೆಗೆ ಬೇಕಾದ ಅಕುಶಲ ಕಾರ್ಮಿಕರು ಸ್ಥಳೀಯ ನಿವಾಸಿಗಳಲ್ಲಿ, ಮುಖ್ಯವಾಗಿ ಸಂತಾಲರಲ್ಲಿ, ದೊರಕುತ್ತಾರೆ. ಹೆಚ್ಚು ಕುಶಲ ಕಾರ್ಮಿಕರು ಭಾರತದ ಎಲ್ಲೆಡೆಗಳಿಂದಲೂ ಮುಖ್ಯವಾಗಿ ಬಂಗಾಲ ಬಿಹಾರಗಳಿಂದ, ಬಂದಿದ್ದಾರೆ.

ಕಬ್ಬಿಣದ ಉರುಳೆಗಳು, ವ್ಯವಸಾಯ ಉಪಕರಣಗಳು, ಉಕ್ಕಿನ ತಗಡುಗಳು, ಉಕ್ಕಿನ ತಂತಿ, ಹೊರಜಿಗಳು, ಮುಂತಾದ ಅನೇಕ ಕೈಗಾರಿಕೆಗಳ ಸಂಕೀರ್ಣ ಇದು. ತಾತಾ ಗುಂಪಿನ ಕೈಗಾರಿಕೆಗಳಲ್ಲದೆ ಇತರ ಅನೇಕ ಚಿಕ್ಕ-ದೊಡ್ಡ ಕಾರ್ಖಾನೆಗಳು ಇವೆ. ಸಾಮಾನ್ಯ ಮತ್ತು ವೈದ್ಯಕೀಯ ಕಾಲೇಜುಗಳೂ ರಾಷ್ಟ್ರೀಯ ಲೋಹಶಾಸ್ತ್ರ ಪ್ರಯೋಗಶಾಲೆಯೂ ಇವೆ. 		(ಬಿ.ಜಿ.ಟಿ.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ